Cinema News
ಭ್ರಷ್ಟಾಚಾರದ ವಿರುದ್ಧ ‘ಕಾಮನ್ ಮ್ಯಾನ್’ ಹೋರಾಟ; ನಾಲ್ಕು ಹಾಡುಗಳು ಬಿಡುಗಡೆ
ಒಬ್ಬ ಸಾಮಾನ್ಯ ವ್ಯಕ್ತಿ ರಾಜ್ಯದ ಮುಖ್ಯಮಂತ್ರಿಯಾದರೆ ಆಡಳಿತ ವ್ಯವಸ್ಥೆಯಲ್ಲಿ ಯಾವ ರೀತಿಯ ಬದಲಾವಣೆ ತರಬಹುದು? ಅಧಿಕಾರಕ್ಕೆ ಬಂದ ಬಳಿಕ ಆತ ಎದುರಿಸುವ ಸವಾಲುಗಳೇನು? ಎಂಬ ಕುತೂಹಲಕಾರಿ ವಿಚಾರವನ್ನು ಕೇಂದ್ರವಾಗಿಟ್ಟುಕೊಂಡು ಮೂಡಿಬಂದಿರುವ ‘ಕಾಮನ್ ಮ್ಯಾನ್’ ಸಿನಿಮಾ ಸೆಪ್ಟೆಂಬರ್ 25ರಂದು ಅದ್ಧೂರಿಯಾಗಿ ತೆರೆಗೆ ಬರಲು ಸಜ್ಜಾಗಿದೆ. ಸಮಾಜ ಸೇವಕ ಎನ್. ನರಸಿಂಹಮೂರ್ತಿ ಕಥೆ ಬರೆದು ಸುರಭಿ ಫಿಲಂಸ್ ಬ್ಯಾನರ್ನಲ್ಲಿ ನಿರ್ಮಿಸಿರುವ ಈ ಚಿತ್ರಕ್ಕೆ ಹಿರಿಯ ನಿರ್ದೇಶಕ ಓಂ ಸಾಯಿ ಪ್ರಕಾಶ್ ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಚಿತ್ರದ ನಾಲ್ಕು ವಿಭಿನ್ನ ಶೈಲಿಯ ಹಾಡುಗಳನ್ನು ಬೆಂಗಳೂರಿನ ಪಂಚತಾರಾ ಹೋಟೆಲ್ನಲ್ಲಿ ಚಿತ್ರರಂಗದ ನಾಲ್ವರು ಗಣ್ಯರು ಬಿಡುಗಡೆ ಮಾಡಿದ್ದು ವಿಶೇಷವಾಗಿತ್ತು.
ಹಿರಿಯ ನಟಿ ಹಾಗೂ ವಿಧಾನ ಪರಿಷತ್ ಸದಸ್ಯೆ ಉಮಾಶ್ರೀ, ನಟ ವಿನೋದ್ ಪ್ರಭಾಕರ್, ಹಿರಿಯ ನಟ ರಮೇಶ್ ಭಟ್ ಹಾಗೂ ನಟಿ ಪ್ರಿಯಾಂಕ ಉಪೇಂದ್ರ ಅವರು ಚಿತ್ರದ ನಾಲ್ಕು ಹಾಡುಗಳಿಗೆ ಪ್ರತ್ಯೇಕವಾಗಿ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ನಿರ್ಮಾಪಕರು, ಪ್ರತಿಯೊಬ್ಬ ಸಾಮಾನ್ಯ ವ್ಯಕ್ತಿಯ ಮನಸ್ಸಿನಲ್ಲೂ ಸಮಾಜದ ಬಗ್ಗೆ ಒಂದಲ್ಲೊಂದು ಕನಸು ಇರುತ್ತದೆ. ಅದೇ ರೀತಿಯಲ್ಲಿ ಒಬ್ಬ ಸಾಮಾನ್ಯ ವ್ಯಕ್ತಿ ಮುಖ್ಯಮಂತ್ರಿ ಸ್ಥಾನಕ್ಕೇರಿದರೆ ಜನರಿಗಾಗಿ ಯಾವ ರೀತಿಯ ಕೆಲಸಗಳನ್ನು ಮಾಡಬಹುದು ಎಂಬ ಕಲ್ಪನೆಯನ್ನು ಚಿತ್ರದಲ್ಲಿ ಕಟ್ಟಿಕೊಡಲಾಗಿದೆ ಎಂದು ಹೇಳಿದರು. ಚಿತ್ರತಂಡಕ್ಕಿಂತ ಅತಿಥಿಗಳು ಹಾಗೂ ಪ್ರೇಕ್ಷಕರು ಸಿನಿಮಾದ ಬಗ್ಗೆ ಮಾತನಾಡುವಂತಾಗಬೇಕು ಎಂಬ ಆಶಯವನ್ನೂ ವ್ಯಕ್ತಪಡಿಸಿದರು.
ದೇಶಭಕ್ತಿ ಗೀತೆಗೆ ಚಾಲನೆ ನೀಡಿದ ರಮೇಶ್ ಭಟ್, ಚಿತ್ರದಲ್ಲಿ ಭ್ರಷ್ಟಾಚಾರದ ವಿರುದ್ಧ ಹೋರಾಟದ ಸಂದೇಶವಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಉಮಾಶ್ರೀ ಅವರು ನಿರ್ದೇಶಕ ಓಂ ಸಾಯಿ ಪ್ರಕಾಶ್ ತಮ್ಮ ವೃತ್ತಿಜೀವನದಲ್ಲಿ ನೀಡಿದ ಪ್ರೋತ್ಸಾಹವನ್ನು ನೆನಪಿಸಿಕೊಂಡರು. ವಿನೋದ್ ಪ್ರಭಾಕರ್ ತಮ್ಮ ತಂದೆಯೊಂದಿಗೆ ಕೆಲಸ ಮಾಡಿದ್ದ ಹಲವರನ್ನು ಒಂದೇ ವೇದಿಕೆಯಲ್ಲಿ ಕಂಡು ಸಂತೋಷವಾಯಿತು ಎಂದರು. ಪ್ರಿಯಾಂಕ ಉಪೇಂದ್ರ ಚಿತ್ರದ ಹಾಡುಗಳು ಬಹಳ ಚೆನ್ನಾಗಿ ಮೂಡಿಬಂದಿವೆ ಎಂದು ಪ್ರಶಂಸಿಸಿದರು. ಗಾಯಕಿ ಚೈತ್ರಾ ಆಚಾರ್, ಕೈಲಾಶ್ ಖೇರ್ ಹಾಗೂ ಬಾಬಾ ಸೈಗಲ್ ಸೇರಿದಂತೆ ಜನಪ್ರಿಯ ಗಾಯಕರು ಸಿನಿಮಾದ ಹಾಡುಗಳಿಗೆ ಧ್ವನಿಯಾಗಿದ್ದಾರೆ.
ಓಂ ಸಾಯಿ ಪ್ರಕಾಶ್ ನಿರ್ದೇಶನದ 106ನೇ ಚಿತ್ರವಾಗಿರುವ ‘ಕಾಮನ್ ಮ್ಯಾನ್’ನಲ್ಲಿ ಗೌರೀಶಂಕರ್ ನಾಯಕನಾಗಿ, ಸೋನಾ ಲದ್ವಾ ನಾಯಕಿಯಾಗಿ ಅಭಿನಯಿಸಿದ್ದಾರೆ. ಹಿರಿಯ ನಟ ಅಶೋಕ್ ರಾಜ್ಯಪಾಲರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವಿನಯ್ ಚಂದ್ರ ಸಂಗೀತ, ಜೆ.ಜಿ. ಕೃಷ್ಣ ಹಾಗೂ ದೀಪಕ್ ಕುಮಾರ್ ಛಾಯಾಗ್ರಹಣ ಮತ್ತು ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನ ಚಿತ್ರಕ್ಕಿದೆ. ಗಣೇಶರಾವ್ ಕೇಸರಕರ್, ಎಸ್ಕಾರ್ಟ್ ಶ್ರೀನಿವಾಸ್, ಪ್ರಕಾಶ್ ತುಮ್ಮಿನಾಡು ಸೇರಿದಂತೆ ಹಲವು ಕಲಾವಿದರು ತಾರಾಬಳಗದಲ್ಲಿದ್ದಾರೆ. ಸಾಮಾನ್ಯ ವ್ಯಕ್ತಿಯೊಬ್ಬ ಮುಖ್ಯಮಂತ್ರಿಯಾದಾಗ ಸಮಾಜದಲ್ಲಿ ಯಾವ ರೀತಿಯ ಸುಧಾರಣೆಗಳನ್ನು ತರಬಹುದು ಎಂಬ ಸಂದೇಶದೊಂದಿಗೆ ಸಿನಿಮಾ ಸೆಪ್ಟೆಂಬರ್ 25ರಂದು ಪ್ರೇಕ್ಷಕರ ಮುಂದೆ ಬರಲಿದೆ.