Cinema News

ಹುಡುಗರ ಮದುವೆ ಸಂಕಷ್ಟಕ್ಕೆ ಸಿನಿ ರೂಪ; ‘ನಾಗೂಗೆ ವಧು ಬೇಕಾಗಿದೆ’ ಗಮನ ಸೆಳೆಯುತ್ತಿದೆ

Published

on

ಇಂದಿನ ಸಮಾಜದಲ್ಲಿ ಹಳ್ಳಿಗಳಲ್ಲಾಗಲಿ ನಗರ ಪ್ರದೇಶಗಳಲ್ಲಾಗಲಿ ಅನೇಕ ಯುವಕರು ಮದುವೆ ಸಂಬಂಧಿತ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇದೇ ಸಮಕಾಲೀನ ವಿಚಾರವನ್ನು ಕೇಂದ್ರವಾಗಿಟ್ಟುಕೊಂಡು ನಿರ್ದೇಶಕ ಆರ್.ಕೆ. ಅವರು ‘ನಾಗೂಗೆ ವಧು ಬೇಕಾಗಿದೆ’ ಚಿತ್ರವನ್ನು ನಿರ್ಮಿಸಿದ್ದಾರೆ. ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯನ್ನು ಸ್ವತಃ ಬರೆದು ನಿರ್ದೇಶಿಸಿರುವ ಈ ಚಿತ್ರ ಶ್ರೀಗುರು ರಾಘವೇಂದ್ರ ಕನ್ನಡ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ಮೂಡಿಬಂದಿದೆ. ಇತ್ತೀಚೆಗೆ ನಡೆದ ಸಮಾರಂಭದಲ್ಲಿ ಚಿತ್ರದ ಶೀರ್ಷಿಕೆ, ಟ್ರೇಲರ್ ಹಾಗೂ ಹಾಡುಗಳನ್ನು ಅನಾವರಣಗೊಳಿಸಲಾಯಿತು. ಕರ್ನಾಟಕ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಟ್ರೇಲರ್ ಮತ್ತು ಹಾಡುಗಳನ್ನು ಬಿಡುಗಡೆ ಮಾಡಿದರೆ, ನಿರ್ದೇಶಕ ಚೇತನ್ ಕುಮಾರ್ ಚಿತ್ರದ ಶೀರ್ಷಿಕೆಯನ್ನು ಅನಾವರಣಗೊಳಿಸಿದರು.

 

ಕಾರ್ಯಕ್ರಮದಲ್ಲಿ ಮಾತನಾಡಿದ ನಾಗಲಕ್ಷ್ಮೀ ಚೌಧರಿ, ಚಿತ್ರದ ಟ್ರೇಲರ್ ಹಾಗೂ ಹಾಡುಗಳಲ್ಲಿ ಕಾಣುವ ತಾಯಿ-ಮಗನ ಭಾವನಾತ್ಮಕ ಬಾಂಧವ್ಯ ಮತ್ತು ಇಂದಿನ ಯುವಕರು ಎದುರಿಸುತ್ತಿರುವ ವಾಸ್ತವ ಸಮಸ್ಯೆಗಳ ಚಿತ್ರಣ ಮನಸ್ಸಿಗೆ ಹತ್ತಿರವಾಗುತ್ತದೆ ಎಂದು ಹೇಳಿದರು. ಸಮಾಜದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಮದುವೆ ಸಂಬಂಧಿತ ಸವಾಲುಗಳನ್ನು ಚಿತ್ರದ ಮೂಲಕ ತೋರಿಸುವ ಪ್ರಯತ್ನ ಶ್ಲಾಘನೀಯವಾಗಿದ್ದು, ಚಿತ್ರ ಯಶಸ್ವಿಯಾಗಲಿ ಎಂದು ಹಾರೈಸಿದರು.

 

 

 

 

 

ನಿರ್ದೇಶಕ ಆರ್.ಕೆ. ಮಾತನಾಡಿ, ಇಂದಿನ ಕಾಲದಲ್ಲಿ ಮದುವೆಗೆ ಸಂಬಂಧಿಸಿದ ಹಲವಾರು ನಿರೀಕ್ಷೆಗಳು ಮತ್ತು ಷರತ್ತುಗಳು ಯುವಕರಿಗೆ ಸವಾಲಾಗಿ ಪರಿಣಮಿಸುತ್ತಿವೆ. ಸರ್ಕಾರದ ಉದ್ಯೋಗ, ಸ್ವಂತ ಮನೆ, ಕುಟುಂಬದ ನಿರ್ದಿಷ್ಟ ಪರಿಸ್ಥಿತಿ ಸೇರಿದಂತೆ ಹಲವು ಬೇಡಿಕೆಗಳು ಸಂಬಂಧಗಳ ಮೇಲೆ ಪರಿಣಾಮ ಬೀರುತ್ತಿವೆ. ಈ ವಾಸ್ತವ ಸಂಗತಿಗಳು ಹಾಗೂ ತಾವು ನೇರವಾಗಿ ಕಂಡ ಕೆಲವು ಘಟನೆಗಳಿಂದ ಪ್ರೇರಿತವಾಗಿ ಕಥೆಯನ್ನು ರೂಪಿಸಿದ್ದೇನೆ. ಇದು ನೈಜ ಘಟನೆಗಳ ಆಧಾರಿತ ಚಿತ್ರವಾಗಿದ್ದು, ಚಿತ್ರೀಕರಣ ಪೂರ್ಣಗೊಂಡಿದೆ. ಮುಂದಿನ ತಿಂಗಳು ಚಿತ್ರವನ್ನು ಬಿಡುಗಡೆ ಮಾಡುವ ಯೋಜನೆ ಇದೆ ಎಂದು ತಿಳಿಸಿದರು.

 

 

 

 

 

 

ಚಿತ್ರದಲ್ಲಿ ದತ್ತು ಪೂಜಾರಿ ನಾಯಕನಾಗಿ ಅಭಿನಯಿಸಿದ್ದು, ಸೋನಿಕಾ ಸೋಮಣ್ಣ, ಚಿತ್ರಾಲ್ ರಂಗಸ್ವಾಮಿ, ಅಪೂರ್ವಶ್ರೀ, ರೇಖಾದಾಸ್ ಹಾಗೂ ಬೌ ಬೌ ಬಿರಿಯಾನಿ ಜಯರಾಮ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. “ನಾಗು” ಎಂಬ ಪಾತ್ರವನ್ನು ನಿರ್ವಹಿಸಿರುವ ದತ್ತು ಪೂಜಾರಿ, ಕಥೆ ಕೇಳಿದ ಕ್ಷಣದಿಂದಲೇ ಚಿತ್ರದಲ್ಲಿ ನಟಿಸುವ ಆಸಕ್ತಿ ಮೂಡಿತ್ತು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ನಟಿಯರಾದ ರೇಖಾದಾಸ್, ಅಪೂರ್ವಶ್ರೀ, ಸೋನಿಕಾ ಸೋಮಣ್ಣ ತಮ್ಮ ಪಾತ್ರಗಳ ಕುರಿತು ಮಾಹಿತಿ ಹಂಚಿಕೊಂಡರು. ಸಂಗೀತ ನಿರ್ದೇಶಕ ಶ್ರೀಸುರೇಶ್ ಹಾಗೂ ಛಾಯಾಗ್ರಾಹಕ ನಾಗರಾಜ್ ಸೇರಿದಂತೆ ಚಿತ್ರತಂಡದ ಸದಸ್ಯರು ಉಪಸ್ಥಿತರಿದ್ದರು.

Spread the love

Copyright © 2019 PopcornKannada.com