Cinema News
ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ಅವರಿಂದ ಬಿಡುಗಡೆಯಾಯಿತು ವಿಕ್ಕಿ ವರುಣ್ – ಧನ್ಯಾ ರಾಮಕುಮಾರ್ ಅಭಿನಯದ “ಕಾಲಾಪತ್ಥರ್” ಚಿತ್ರದ ಟ್ರೇಲರ್. .
ಭುವನ್ ಮೂವೀಸ್ ಲಾಂಛನದಲ್ಲಿ ಭುವನ್ ಸುರೇಶ್ ಹಾಗೂ ನಾಗರಾಜ್ ಬಿಲ್ಲಿನಕೋಟೆ ನಿರ್ಮಿಸಿರುವ, “ಕೆಂಡಸಂಪಿಗೆ”, “ಕಾಲೇಜ್ ಕುಮಾರ” ಖ್ಯಾತಿಯ ವಿಕ್ಕಿ ವರುಣ್ ನಿರ್ದೇಶಿಸಿ, ನಾಯಕನಾಗೂ ನಟಿಸಿರುವ “ಕಾಲಾಪತ್ಥರ್” ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ಈ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.
ಟ್ರೇಲರ್ ಬಿಡುಗಡೆ ಮಾಡಿ ಮಾತನಾಡಿದ ಶಿವರಾಜಕುಮಾರ್ ಅವರು, “ಕಾಲಾಪತ್ಥರ್” ಚಿತ್ರದ ಟ್ರೇಲರ್ ತುಂಬಾ ಚೆನ್ನಾಗಿದೆ. ಈ ಚಿತ್ರ ಖಂಡಿತ ಸೂಪರ್ ಹಿಟ್ ಆಗಲಿದೆ ಎಂದು ಹಾರೈಸಿದರು.
ನಾನು ನಟ ಆಗಬೇಕೆಂದುಕೊಂಡವನಲ್ಲ. ನಿರ್ದೇಶಕನಾಗಬೇಕೆಂದು ಚಿತ್ರರಂಗಕ್ಕೆ ಬಂದವನು. ದುನಿಯಾ ಸೂರಿ ಅವರ ಬಳಿ ಸಹಾಯಕನಾಗಿ ಕೆಲಸ ಮಾಡಿದ್ದೇನೆ. ಈ ಸಮಯದಲ್ಲಿ ಅವರನ್ನು ನೆನಪಿಸಿಕೊಳ್ಳುತ್ತೇನೆ. ಇನ್ನು “ಕಡ್ಡಿಪುಡಿ” ಚಿತ್ರದ ಸಮಯದಲ್ಲಿ ಶಿವಣ್ಣ ಅವರು ಮಾತಾನಾಡಿಸಿದು ಹಾಗೂ ಅವರ ಜೊತೆ ಒಂದು ದೃಶ್ಯದಲ್ಲಿ ಅಭಿನಯಿಸಿದ್ದು ಮರೆಯಲಾಗದ ಕ್ಷಣ. ಇಂದು ಅವರೆ ನನ‌್ನ ನಿರ್ದೇಶನದ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದ್ದು ಮತ್ತಷ್ಟು ಸಂತೋಷವಾಗಿದೆ. ಅವಕಾಶ ಕೊಟ್ಟ ನಿರ್ಮಾಪಕರಿಗೆ ಹಾಗೂ ಚಿತ್ರತಂಡದವರಿಗೆ ಧನ್ಯವಾದ. ಸೆಪ್ಟೆಂಬರ್ 13 ರಂದು ಚಿತ್ರ ಬಿಡುಗಡೆಯಾಗುತ್ತಿದೆ ನೋಡಿ ಪ್ರೋತ್ಸಾಹಿಸಿ ಎಂದರು ನಿರ್ದೇಶಕ ಹಾಗೂ ನಟ ವಿಕ್ಕಿ ವರುಣ್.
ಶಿವಣ್ಣ ಮಾವ ಟ್ರೇಲರ್ ಬಿಡುಗಡೆ ಮಾಡಿಕೊಟ್ಟು ಆಶೀರ್ವಾದ ಮಾಡಿದ್ದಾರೆ. ವಿನಯ್ ರಾಜಕುಮಾರ್ ಸಹ ಬಂದಿದ್ದಾರೆ. ಮೊದಲಿನಿಂದಲೂ ನನ್ನ ಕುಟುಂಬ ನನಗೆ ಸಹಕಾರ ನೀಡುತ್ತಾ ಬಂದಿದ್ದಾರೆ. ಈ ಚಿತ್ರದಲ್ಲಿ ನನ್ನ ಹಿಂದಿನ ಚಿತ್ರಗಳಿಗಿಂತ ವಿಭಿನ್ನ ಪಾತ್ರ ಎಂದು ಧನ್ಯ ರಾಮಕುಮಾರ್ ತಿಳಿಸಿದರು.
ಚಿತ್ರದಲ್ಲಿ ನಟಿಸಿರುವ ಹಿರಿಯ ನಿರ್ದೇಶಕ ಟಿ.ಎಸ್.ನಾಗಾಭರಣ, ರಾಜೇಶ್ ನಟರಂಗ, ಚಕ್ರವರ್ತಿ ಚಂದ್ರಚೂಡ್ ಮುಂತಾದ ಕಲಾವಿದರು ಹಾಗೂ ತಂತ್ರಜ್ಞರು ಚಿತ್ರದ ಕುರಿತು ಮಾತನಾಡಿದರು.
ನಿರ್ಮಾಪಕರಾದ ಭುವನ್ ಸುರೇಶ್, ನಾಗರಾಜ್ ಬಿಲ್ಲನಕೋಟೆ ಎಲ್ಲರೂ ಚಿತ್ರ ನೋಡಿ ಪ್ರೋತ್ಸಾಹಿಸಿ ಎಂದರು. .