Cinema News
ತಮಿಳಿಗೆ ಆಸ್ಕರ್ ಪ್ರಶಸ್ತಿ ವಿಜೇತ ಎಂ.ಎಂ. ಕೀರಣವಾಣಿ; ‘ಜಂಟಲ್ಮ್ಯಾನ್ 2’ ಚಿತ್ರಕ್ಕೆ ಸಂಗೀತ ನಿರ್ದೇಶನ

RRR ಚಿತ್ರದ ನಾಟ್ಟು ನಾಟ್ಟು ಹಾಡಿಗೆ ಆಸ್ಕರ್ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದ ತೆಲುಗಿನ ಖ್ಯಾತ ಸಂಗೀತ ನಿರ್ದೇಶಕ ಎಂ.ಎಂ. ಕೀರವಾಣಿ ಅವರಿಗೆ ತಮಿಳು ಚಿತ್ರರಂಗ ಹೊಸದಲ್ಲ. ಈಗಾಗಲೇ ಕೆಲವು ತಮಿಳು ಚಿತ್ರಗಳಿಗೆ ಸಂಗೀತ ಸಂಯೋಜಿಸಿರುವ ಕೀರವಾಣಿ, ಈಗ ಮತ್ತೆ ಕಾಲಿವುಡ್ನತ್ತ ಪ್ರಯಾಣ ಬೆಳೆಸಿದ್ದಾರೆ.
ಈ ಹಿಂದೆ ‘ಜಂಟಲ್ಮ್ಯಾನ್’, ‘ಕಾದಲ್ ದೇಶಂ’ ಸೇರಿದಂತೆ ಹಲವು ಸೂಪರ್ ಹಿಟ್ ತಮಿಳು ಚಿತ್ರಗಳನ್ನು ನಿರ್ಮಿಸಿರುವ ಕೆ.ಟಿ. ಕುಂಜುಮೋನ್, ಈಗ ಬಹಳ ದಿನಗಳ ನಂತರ ‘ಜಂಟಲ್ಮ್ಯಾನ್ 2’ ಚಿತ್ರದ ಮೂಲಕ ನಿರ್ಮಾಣಕ್ಕೆ ವಾಪಸ್ಸಾಗಿದ್ದಾರೆ. ಈ ಚಿತ್ರದ ಚಿತ್ರೀಕರಣ ಸದ್ಯದಲ್ಲೇ ಪ್ರಾರಂಭವಾಗಿದ್ದು, ಈ ಚಿತ್ರಕ್ಕೆ ಸಂಗೀತ ಸಂಯೋಜಿಸುವುದಕ್ಕೆ ಕೀರವಾಣಿ ಒಪ್ಪಿದ್ದಾರೆ.
ಎರಡು ತಿಂಗಳ ಹಿಂದಷ್ಟೇ ಅಮೇರಿಕಾದಲ್ಲಿ ನಡೆದ ಸಮಾರಂಭದಲ್ಲಿ ಕೀರವಾಣಿ ಅವರಿಗೆ ಆಸ್ಕರ್ ಪ್ರಶಸ್ತಿ ಲಭಿಸಿತ್ತು. ಅವರು ಅಲ್ಲಿಂದ ಭಾರತಕ್ಕೆ ಬಂದ ಮೇಲೆ, ಅವರನ್ನು ಹೈದರಾಬಾದ್ನಲ್ಲಿ ‘ಜಂಟಲ್ಮ್ಯಾನ್ 2’ ಚಿತ್ರದ ನಿರ್ದೇಶಕ ಎ. ಗೋಕುಲ್ ಕೃಷ್ಣ ಭೇಟಿಯಾಗಿದ್ದಾರೆ. ಗೋಕುಲ್ ಹೇಳಿದ ಕಥೆ ಕೇಳಿ ಖುಷಿಯಾದ ಕೀರವಾಣಿ, ತಕ್ಷಣವೇ ಚಿತ್ರಕ್ಕೆ ಸಂಗೀತ ಸಂಯೋಜಿಸುವುದಾಗಿ ಹೇಳಿದ್ದಾರೆ. ಅಷ್ಟೇ ಅಲ್ಲ, ತಕ್ಷಣವೇ ನಿರ್ಮಾಪಕ ಕುಂಜುಮೋನ್ ಅವರಿಗೆ ಕರೆ ಮಾಡಿ, ಮುಂದಿನ ತಿಂಗಳಿನಿಂದ ಸಂಗೀತ ಸಂಯೋಜನೆ ಕೆಲಸ ಪ್ರಾರಂಭಿಸುವುದಾಗಿ ಹೇಳಿದ್ದಾರೆ.‘ಜಂಟಲ್ಮ್ಯಾನ್ 2’ ಚಿತ್ರವು ಸದ್ಯ ಪ್ರೀ-ಪ್ರೊಡಕ್ಷನ್ ಹಂತದಲ್ಲಿದ್ದು, ಸದ್ಯದಲ್ಲೇ ಕಲಾವಿದರು ಮತ್ತು ತಂತ್ರಜ್ಞರ ಪಟ್ಟಿ ಹೊರಬೀಳಲಿದೆ.
