Cinema News
ಫೆ. 5ರಂದು ತೆರೆಗೆ ಬರಲಿದೆ ವಿನೋದ್ ಪ್ರಭಾಕರ್ “ಶ್ಯಾಡೊ”
ಶ್ರೀಕನಕ ದುರ್ಗಾ ಚಲನಚಿತ್ರ ಅರ್ಪಿಸುತ್ತಿರುವ ಚಕ್ರವರ್ತಿ ಅವರು ನಿರ್ಮಾಣ ಮಾಡಿರುವ ಶ್ಯಾಡೊ ಸಿನಿಮಾ ಬಿಡುಗಡೆಗೆ ಸಿದ್ಧವಾಗದೆ. ಫೆ, 5ರಂದು ಈ ಸಿನಿಮಾ ಬಿಡುಗಡೆ ಆಗಲಿದ್ದು, ಇತ್ತೀಚೆಗಷ್ಟೇ ಚಿತ್ರತಂಡ ಸುದ್ದಿಗೋಷ್ಠಿ ಏರ್ಪಡಿಸಿ ಚಿತ್ರದ ಅಧಿಕೃತ ಬಿಡುಗಡೆ ದಿನಾಂಕವನ್ನು ಲಾಕ್ ಮಾಡಿದೆ.
ರವಿ ಗೌಡ ನಿರ್ದೇಶನ ಮಾಡಿರುವ ಶ್ಯಾಡೊ ಮಾಸ್ ಜತೆಗೆ ಕ್ಲಾಸ್ ಸಿನಿಮಾವಂತೆ. ಅದನ್ನು ಸ್ವತಃ ಚಿತ್ರದ ನಾಯಕ ಮರಿ ಟೈಗರ್ ವಿನೋದ್ ಪ್ರಭಾಕರ್ ಹೇಳಿಕೊಂಡಿದ್ದಾರೆ.
‘ಕೊನೇ ಕ್ಷಣದಲ್ಲಿ ಬಿಡುಗಡೆ ಮಾಡುವ ನಿರ್ಧಾರವಾಯ್ತು. ಎಲ್ಲೋ ಒಂದು ಕಡೆ ಭಯ ಇದೆ. ಆದರೂ ಒಳ್ಳೇ ಕಥೆಯೊಂದಿಗೆ ಈ ಬಾರಿ ಚಿತ್ರಮಂದಿರಕ್ಕೆ ಬರುತ್ತಿದ್ದೇನೆ. ಇಲ್ಲಿಯವರೆಗೂ ನನ್ನ ಸಿನಿಮಾಗಳಲ್ಲಿ ಮಾಸ್ ಅಂಶಗಳೇ ಹೆಚ್ಚಿರುತ್ತಿತ್ತು. ಆದ್ರೆ, ಶ್ಯಾಡೋ ಸಿನಿಮಾ ಮಾತ್ರ ಕ್ಲಾಸ್ ಆಡಿಯನ್ಸ್‌ಗೂ ಇಷ್ಟವಾಗಲಿದೆ.
ಅಂದುಕೊಂಡಿದ್ದಕ್ಕಿಂತ ಅಚ್ಚುಕಟ್ಟಾಗಿ ಸಿನಿಮಾ ಮೂಡಿಬಂದಿದೆ. ಇಲ್ಲಿಯೂ ಬೇರ್ ಬಾಡಿ ಫೈಟ್ ಸೀನ್ ಕಾಣಬಹುದು. ಇಡೀ ಸಿನಿಮಾದಲ್ಲಿ ಎರಡೇ ಹಾಡಿದ್ದರೂ, ಒಂದೊಳ್ಳೆ ಫ್ಯಾಮಿಲಿ ಎಂಟರ್‌ಟೈನರ್ ಸಿನಿಮಾ ಇದು. ಇಷ್ಟು ದಿನ ಸಿಂಗಲ್ ಸ್ಟ್ರೀನ್ ಮೇಲೆ ಹೆಚ್ಚು ನೋಡಿದ್ದ ನನ್ನನ್ನು, ಮಾಲ್‌ನಲ್ಲಿಯೂ ಈ ಸಿನಿಮಾಕ್ಕೆ ಒಳ್ಳೇಯ ಪ್ರತಿಕ್ರಿಯೆ ಸಿಗಲಿದೆ ಎಂಬ ಭರವಸೆ ಇದೆ. ನಮ್ಮ ಚಿತ್ರವನ್ನು ಧೀರಜ್ ಎಂಟರ್‌ಪ್ರೈಸಿಸ್ ನವರು ವಿತರಣೆಯ ಹಕ್ಕನ್ನು ಪಡೆದುಕೊಂಡಿದ್ದಾರೆ ಎಂದರು ವಿನೋದ್.
ಇನ್ನು ಚಿತ್ರದ ವಿತರಕ ಧೀರಜ್ ಎಂಟರ್‌ಪ್ರೈಸಿಸ್‌ನ ಮೋಹನ್ ದಾಸ್ ಪೈ ಸಹ ಸಿನಿಮಾ ಬಿಡುಗಡೆ ಮಾಡುತ್ತಿರುವುದಕ್ಕೆ ಅಷ್ಟೇ ಉತ್ಸಾಹದಲ್ಲಿಯೇ ಮಾತನಾಡಿದರು. ಕೊರೊನಾ ಬಳಿಕ ನಾಲ್ಕು ಸಿನಿಮಾಗಳನ್ನು ಬಿಡುಗಡೆ ಮಾಡಿದ್ದೇನೆ. ಎಲ್ಲ ಕಡೆಗಳಿಂದಲೂ ಒಳ್ಳೇ ರೆಸ್ಪಾನ್ಸ್ ಸಿಕ್ಕಿದೆ. ಅದೇ ರೀತಿ ಇದೀಗ ಶ್ಯಾಡೋ ಸಿನಿಮಾ ಕೈಗೆತ್ತಿಕೊಂಡಿದ್ದೇನೆ. ಪ್ರೇಕ್ಷಕರು ಆಗಮಿಸಿ ಈ ಚಿತ್ರಕ್ಕೂ ಆಶೀರ್ವದಿಸಲಿದ್ದಾರೆ ಎಂದು ಅವರು ಹೇಳಿದ್ದಾರೆ.
ಅದೇ ರೀತಿ ಕಾಮಿಡಿ ಕಿಲಾಡಿಗಳು ಖ್ಯಾತಿಯ ಲೋಕೇಶ್ ಈ ಸಿನಿಮಾದಲ್ಲಿ ಹಾಸ್ಯನಟನ ಪಾತ್ರ ನಿಭಾಯಿಸಿದ್ದಾರೆ. ಅವರೂ ಸಹ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು. ಇಡೀ ಕುಟುಂಬ ನೋಡುವ ಸಿನಿಮಾ ಇದು. ವಿನೋದಣ್ಣ ಮಾಸ್ ಗೂ ಸೈ, ಕ್ಲಾಸ್‌ಗೂ ಸೈ ಎನಿಸುವಂತೆ ನಟಿಸಿದ್ದಾರೆ. ಕಾಮಿಡಿ, ಸೆಂಟಿಮೆಂಟ್ ಸೇರಿ ಸಾಕಷ್ಟು ಅಂಶಗಳು ಈ ಸಿನಿಮಾದಲ್ಲಿವೆ ಎಂದರು.
ಇನ್ನು ಈ ಚಿತ್ರದಲ್ಲಿ ವಿನೋದ್‌ಗೆ ಜೋಡಿಯಾಗಿ ಶೋಭಿತಾ ರಾಣಾ ನಟಿಸಿದ್ದಾರೆ. ಶರತ್ ಲೋಹಿತಾಶ್ವ, ಶ್ರವಣ್, ಸತ್ಯದೇವ್ ಸೇರಿ ಹಲವರು ಈ ಸಿನಿಮಾದಲ್ಲಿದ್ದಾರೆ. ಕತೆ, ಚಿತ್ರಕತೆ ಮತ್ತು ಸಂಭಾಷಣೆಯನ್ನು ನಿರ್ದೇಶಕ ರವಿ ಬರೆದಿದ್ದಾರೆ. ಅಚ್ಚು ಅವರ ಸಂಗೀತ, ಮನೋಹರ್ ಜೋಷಿ ಛಾಯಾಗ್ರಹಣ, ಚೋಟಾ ಪ್ರಸಾದ್ ಸಂಕಲನ, ವಿನೋದ್ ಅವರು ಸಾಹಸ ನಿರ್ದೇಶನ ಮಾಡಿದ್ದಾರೆ.