Cinema News
ಇಂದಿನ ಜನರೇಷನ್ ನೋಡಲೇಬೇಕಾದ ಸಿನಿಮಾ ‘ಖೇಲಾ’: ಹಿರಿಯ ನಟಿ ಸ್ವಾತಿ
ಈಗಾಗಲೇ ‘ಅಮ್ಮ’ ಹಾಡಿನ ಮೂಲಕ ಪ್ರೇಕ್ಷಕರ ಗಮನ ಸೆಳೆದಿರುವ ‘ಖೇಲಾ’ ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಗಿದೆ. ಚಿತ್ರದ ಕಲಾವಿದರು ಹಾಗೂ ತಂತ್ರಜ್ಞರ ತಾಯಂದಿರೇ ಟ್ರೇಲರ್ ಅನಾವರಣಗೊಳಿಸಿದ್ದು ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿತ್ತು. ನಿರ್ದೇಶನದ ಜೊತೆಗೆ ನಿರ್ಮಾಣದ ಜವಾಬ್ದಾರಿಯನ್ನೂ ವಹಿಸಿಕೊಂಡಿರುವ ವಿ.ಜೆ. ಭರತ್, ತಾಯಿ-ಮಗನ ಬಾಂಧವ್ಯ, ಸ್ನೇಹ ಹಾಗೂ ಪ್ರೀತಿಯ ಸುತ್ತ ಹೆಣೆದಿರುವ ಕಥೆಯನ್ನು ತೆರೆಗೆ ತಂದಿದ್ದಾರೆ. ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಚಿತ್ರತಂಡದ ಪ್ರಮುಖರು ತಮ್ಮ ಅನುಭವಗಳನ್ನು ಹಂಚಿಕೊಂಡು ಸಿನಿಮಾದ ವಿಶೇಷತೆಗಳನ್ನು ಪರಿಚಯಿಸಿದರು.
ನಿರ್ದೇಶಕ ಹಾಗೂ ನಿರ್ಮಾಪಕ ವಿ.ಜೆ. ಭರತ್ ಮಾತನಾಡಿ, ನಾಯಕ ವಿಹಾನ್ ಪ್ರಭಂಜನ್ ಚಿತ್ರದ ಪ್ರಮುಖ ಪಾತ್ರದಲ್ಲಿದ್ದರೂ, ತಾಯಿಯ ಪಾತ್ರದಲ್ಲಿ ಅಭಿನಯಿಸಿರುವ ಸ್ವಾತಿ ಅವರೇ ಕಥೆಯ ನಿಜವಾದ ನಾಯಕಿ ಎನ್ನಬಹುದು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಸ್ವಾತಿ ತಮ್ಮ ಪಾತ್ರಕ್ಕೆ ಜೀವ ತುಂಬಿದ್ದಾರೆ ಎಂದು ಹೇಳಿದ ಅವರು, ತಮ್ಮ ತಾಯಿ ಹಾಗೂ ತಂಗಿಯ ಬೆಂಬಲದಿಂದ ಈ ಚಿತ್ರ ನಿರ್ಮಿಸಲು ಸಾಧ್ಯವಾಯಿತು ಎಂದರು. ಸ್ನೇಹ, ಪ್ರೀತಿ ಮತ್ತು ತಾಯಿಯ ಮಹತ್ವವನ್ನು ಸಾರುವ ಕಥೆ ಇದಾಗಿದ್ದು, ಬಿಗ್ಬಾಸ್ ಖ್ಯಾತಿಯ ಸಂಗೀತಾ ಭಟ್ ಕೂಡ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರಮೋದ್ ಗೌಡ ಅವರ ಛಾಯಾಗ್ರಹಣ ಹಾಗೂ ಎಂ.ಎಸ್. ತ್ಯಾಗರಾಜ್ ಅವರ ಸಂಗೀತ ಚಿತ್ರಕ್ಕೆ ಮತ್ತಷ್ಟು ಬಲ ನೀಡಿದ್ದು, ಇಡೀ ತಂಡದ ಪರಿಶ್ರಮದಿಂದ ಸಿನಿಮಾ ಉತ್ತಮವಾಗಿ ಮೂಡಿಬಂದಿದೆ ಎಂದು ತಿಳಿಸಿದರು.
‘ಶ್ರಾವಣಿ ಸುಬ್ರಹ್ಮಣ್ಯ’ ಹಾಗೂ ‘ಮೈನಾ’ ಧಾರಾವಾಹಿಗಳ ಮೂಲಕ ಗುರುತಿಸಿಕೊಂಡಿರುವ ನಾಯಕ ವಿಹಾನ್ ಪ್ರಭಂಜನ್ ಮಾತನಾಡಿ, ಚಿತ್ರದಲ್ಲಿ ಭರತ್ ಎಂಬ ಪಾತ್ರವನ್ನು ನಿರ್ವಹಿಸಿರುವುದಾಗಿ ಹೇಳಿದರು. ಪ್ರತಿಯೊಬ್ಬರ ಮನೆಯಲ್ಲೂ ನಡೆಯಬಹುದಾದ ಸಾಮಾನ್ಯ ಬದುಕಿನ ಘಟನೆಗಳನ್ನು ಆಧರಿಸಿರುವುದರಿಂದ ಈ ಕಥೆ ಪ್ರೇಕ್ಷಕರಿಗೆ ಸುಲಭವಾಗಿ ಹತ್ತಿರವಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಚಿತ್ರದ ನಾಯಕಿ ಆಶಿಕಾ ರಾವ್ ಅವರಿಗೆ ಇದು ಮೊದಲ ಸಿನಿಮಾವಾಗಿದ್ದು, ತಮ್ಮ ಪಾತ್ರದಲ್ಲಿ ಅಭಿನಯಕ್ಕೆ ಸಾಕಷ್ಟು ಅವಕಾಶ ದೊರೆತಿದೆ ಎಂದು ಸಂತಸ ಹಂಚಿಕೊಂಡರು. ಟ್ರೇಲರ್ನಂತೆಯೇ ಪೂರ್ಣ ಸಿನಿಮಾ ಕೂಡ ಪ್ರೇಕ್ಷಕರಿಗೆ ಇಷ್ಟವಾಗಲಿದೆ ಎಂಬ ನಿರೀಕ್ಷೆಯನ್ನು ಅವರು ವ್ಯಕ್ತಪಡಿಸಿದರು. ನಾಯಕನ ತಾಯಿಯ ಪಾತ್ರದಲ್ಲಿ ಕಾಣಿಸಿಕೊಂಡಿರುವ ಹಿರಿಯ ನಟಿ ಸ್ವಾತಿ, ತಾಯಿ ಎಂಬುದು ಅತ್ಯಂತ ಶ್ರೇಷ್ಠವಾದ ಸಂಬಂಧವಾಗಿದ್ದು, ಮಕ್ಕಳಿಗಾಗಿ ತಾಯಿ ಅನುಭವಿಸುವ ತ್ಯಾಗ ಮತ್ತು ಸಂಕಷ್ಟಗಳನ್ನು ಚಿತ್ರದಲ್ಲಿ ಭಾವನಾತ್ಮಕವಾಗಿ ಕಟ್ಟಿಕೊಡಲಾಗಿದೆ ಎಂದರು. ಇಂದಿನ ಯುವಜನತೆ ಈ ಸಿನಿಮಾವನ್ನು ನೋಡಬೇಕು ಎಂದು ಮನವಿ ಮಾಡಿದರು.
ನಾಯಕನ ಗೆಳೆಯನ ಪಾತ್ರ ನಿರ್ವಹಿಸಿರುವ ಯುವರಾಜ್ ಗೌಡ ಮಾತನಾಡಿ, ಸ್ನೇಹ, ಪ್ರೀತಿ ಹಾಗೂ ತಾಯಿಯ ಸೆಂಟಿಮೆಂಟ್ ಒಳಗೊಂಡಿರುವ ‘ಖೇಲಾ’ ಚಿತ್ರವನ್ನು ಪ್ರೇಕ್ಷಕರು ನೋಡಿ ಪ್ರೋತ್ಸಾಹಿಸಬೇಕು ಎಂದು ಕೋರಿದರು. ಸಂಗೀತ ನಿರ್ದೇಶಕ ಎಂ.ಎಸ್. ತ್ಯಾಗರಾಜ್ ಮಾತನಾಡಿ, ನಿರ್ದೇಶಕ ಭರತ್ ಅವರೊಂದಿಗಿನ ಉತ್ತಮ ಒಡನಾಟದಿಂದಾಗಿ ಸಿನಿಮಾದ ಕೆಲಸಗಳು ಆತ್ಮೀಯ ಅನುಭವ ನೀಡಿದವು ಎಂದರು. ಚಿತ್ರದ ಕೆಲವು ಸನ್ನಿವೇಶಗಳು ತಮ್ಮ ಹಿಂದಿನ ಜೀವನದ ನೆನಪುಗಳನ್ನು ಮರುಕಳಿಸುವಂತೆ ಮಾಡಿದ್ದಾಗಿ ತಿಳಿಸಿದರು. ಸ್ವಾತಿ ಅವರ ಅಭಿನಯ ಪ್ರೇಕ್ಷಕರ ಮನಸ್ಸಿಗೆ ಹತ್ತಿರವಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ ಅವರು, ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ದರ್ಶನ್ ನಾರಾಯಣ್, ಜಸ್ಕರಣ್ ಸಿಂಗ್ ಸೇರಿದಂತೆ ಹಲವು ಗಾಯಕರು ಹಾಡಿದ್ದಾರೆ ಎಂದು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಸಂಭಾಷಣೆ ಬರೆದಿರುವ ಪ್ರಮೋದ್ ಜೋಯಿಸ್ ಹಾಗೂ ಛಾಯಾಗ್ರಾಹಕ ಪ್ರಮೋದ್ ಗೌಡ ಕೂಡ ತಮ್ಮ ಅನುಭವಗಳನ್ನು ಹಂಚಿಕೊಂಡರು. ತಾಯಿಯ ಪ್ರೀತಿ ಮತ್ತು ಕುಟುಂಬದ ಭಾವನೆಗಳನ್ನು ಕೇಂದ್ರವಾಗಿಟ್ಟುಕೊಂಡಿರುವ ‘ಖೇಲಾ’ ಚಿತ್ರದ ಟ್ರೇಲರ್ ಇದೀಗ ಚಿತ್ರದ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿದೆ.