Cinema News

ಅಂಬಿ ಹುಟ್ಟು ಹಬ್ಬಕ್ಕೆ ಹೊಸ ತಂತ್ರಜ್ಞಾನದೊಂದಿಗೆ ‘ಅಂತ’ ಚಿತ್ರ ಮರು ಬಿಡುಗಡೆ

Published

on

 

80ರ ದಶಕದಲ್ಲಿ ಕನ್ನಡ ಚಿತ್ರರಂಗದಲ್ಲಿ ಹೊಸ ದಾಖಲೆ ನಿರ್ಮಿಸಿದ ಚಿತ್ರ ಅಂತ.1981ರಲ್ಲಿ ಬಿಡುಗಡೆಯಾಗಿದ್ದ ಈ ಚಿತ್ರಕ್ಕೆ ಎಸ್.ವಿ.ರಾಜೇಂದ್ರ ಸಿಂಗ್ ಬಾಬು ಆಕ್ಷನ್ ಕಟ್ ಹೇಳಿದ್ದರು. ರೆಬೆಲ್‍ಸ್ಟಾರ್ ಅಂಬರೀಶ್ ಇನ್ಸ್‍ಪೆಕ್ಟರ್ ಸುಶೀಲ್‍ಕುಮಾರ್ ಪಾತ್ರದ ಮೂಲಕ ನಾಡಿನ ಜನತೆಯಲ್ಲಿ ದೇಶಾಭಿಮಾನದ ಕಿಚ್ಚು ಹಚ್ಚಿಸಿದ್ದರು. ಅಲ್ಲದೆ ಅಂಬರೀಶ್ ಕನ್ವರ್‍ಲಾಲ್ ಎಂಬ ನೆಗೆಟಿವ್ ಪಾತ್ರವನ್ನು ಕೂಡ ಅಂತ ಚಿತ್ರದಲ್ಲಿ ನಿರ್ವಹಿಸಿದ್ದರು. ಆನಂತರ ಅಂಬರೀಶ್ ಅಭಿನಯಿಸಿದ್ದ ಆ  ಕನ್ವರ್‍ಲಾಲ್ ಪಾತ್ರ ಮತ್ತೊಂದು ಚಿತ್ರದ ನಿರ್ಮಾಣಕ್ಕೂ ಕಾರಣವಾಯಿತು.

ಸುಧಾ ವಾರ ಪತ್ರಿಕೆಯಲ್ಲಿ ಪ್ರಕಟವಾದ ಹೆಚ್. ಕೆ. ಅನಂತರಾವ್ ಅವರ ಕಾದಂಬರಿಯನ್ನಾಧರಿಸಿ ನಿರ್ಮಾಣವಾದ ಆ ಚಿತ್ರ ಈಗ ಮತ್ತೊಮ್ಮೆ ನೂತನ ತಂತ್ರಜ್ಞಾನದೊಂದಿಗೆ ಮೇ ತಿಂಗಳಲ್ಲಿ ಅಂಬರೀಶ್ ಅವರ ಹುಟ್ಟುಹಬ್ಬದ ಸಮಯದಲ್ಲಿ ಬೆಳ್ಳಿತೆರೆಯ ಮೇಲೆ ಬರುತ್ತಿದೆ. 

ಪರಿಮಳ ಆರ್ಟ್ ಮೂಲಕ ಹೆಚ್.ಎನ್. ಮಾರುತಿ ಹಾಗೂ ವೇಣುಗೋಪಾಲ್ ಈ ಚಿತ್ರವನ್ನು ನಿರ್ಮಿಸಿದ್ದರು. ಎಸ್.ವಿ.ರಾಜೇಂದ್ರ ಸಿಂಗ್ ಬಾಬು ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದರು. ಜಿ.ಕೆ. ವೆಂಕಟೇಶ್ ಅವರ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದಿದ್ದ ಅಂತ ಚಿತ್ರದ ಸುಮಧುರ ಗೀತೆಗಳು ಇಂದಿಗೂ ಜನಮಾನಸದಲ್ಲಿ ಅಚ್ಚಳಿಯದೇ ನಿಂತಿವೆ. ಈ ಚಿತ್ರವನ್ನು ಈಗ ಡಿಜಿಟಲ್ ಫಾರ್ಮಾಟ್‍ನಲ್ಲಿ ಬಿಡುಗಡೆ ಮಾಡಲು ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ.  

ಹೊಸ ರೂಪದ `ಅಂತ` ಚಿತ್ರವನ್ನು ರಾಜ್ಯಾದ್ಯಂತ ಅತೀ ಹೆಚ್ಚು ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ಬಿಡುಗಡೆ ಮಾಡಲಾಗುತ್ತಿದೆ ಎಂದು ನಿರ್ಮಾಪಕ ವೇಣುಗೋಪಾಲ್ ತಿಳಿಸಿದ್ದಾರೆ. ಈ ಚಿತ್ರದ ಪ್ರಮುಖ ತಾರಾಗಣದಲ್ಲಿ  ರೆಬೆಲ್‍ಸ್ಟಾರ್ ಅಂಬರೀಶ್(ದ್ವಿಪಾತ್ರ) ಲಕ್ಷ್ಮಿ, ಜಯಮಾಲಾ, ಲತಾ, ಪಂಡರೀಬಾಯಿ, ವಜ್ರಮುನಿ, ಪ್ರಭಾಕರ್, ಸುಂದರ ಕೃಷ್ಣ ಅರಸ್, ಶಕ್ತಿ ಪ್ರಸಾದ್, ಲಕ್ಷ್ಮಣ್, ಸಿ.ಸೀತಾರಾಮ್ ನಟಿಸಿದ್ದರು.

Spread the love
Click to comment

Copyright © 2019 PopcornKannada.com